Headlines
Loading...
7th Pay Commission; ಸರ್ಕಾರಿ ನೌಕರರು ಇಟ್ಟ ಬೇಡಿಕೆ ಏನು?

7th Pay Commission; ಸರ್ಕಾರಿ ನೌಕರರು ಇಟ್ಟ ಬೇಡಿಕೆ ಏನು?



ಬೆಂಗಳೂರು: ಜನವರಿ 08: ಕರ್ನಾಟಕ ಸರ್ಕಾರ 7ನೇ ರಾಜ್ಯ ವೇತನ ಆಯೋಗದ ವರದಿಯನ್ನು ಯಾವಾಗ ಜಾರಿ ಮಾಡಲಿದೆ? ಎಂಬುದು ಸರ್ಕಾರಿ ನೌಕರರ ಪ್ರಶ್ನೆಯಾಗಿದೆ. ಮಾರ್ಚ್‌ನಲ್ಲಿ ಆಯೋಗ ಸರ್ಕಾರಕ್ಕೆ ವರದಿ ಸಲ್ಲಿಕೆ ಮಾಡಲಿದೆ. ಆಯೋಗದ ಶಿಫಾರಸು ಜಾರಿ ಮಾಡಲು ಮುಂದಾದರೆ ಸರ್ಕಾರಕ್ಕೆ ಆಗುವ ಆರ್ಥಿಕ ಹೊರೆಯ ಕುರಿತು ಈಗ ಚರ್ಚೆಗಳು ನಡೆಯುತ್ತಿವೆ.

ನವೆಂಬರ್ 6ರಂದು ಕರ್ನಾಟಕ ಸರ್ಕಾರ ಆದೇಶವೊಂದನ್ನು ಹೊರಡಿಸಿತು. 7ನೇ ರಾಜ್ಯ ವೇತನ ಆಯೋಗದ ಅವಧಿಯನ್ನು ವಿಸ್ತರಣೆ ಮಾಡಿ ಆದೇಶ ಹೊರಡಿಸಿದೆ. ಆಯೋಗದ ತನ್ನ ಪರಿಷ್ಕರಣೆಗಳನ್ನು ಪೂರ್ಣಗೊಳಿಸಿ ಸರ್ಕಾರಕ್ಕೆ ವರದಿ ಸಲ್ಲಿಕೆ ಮಾಡಲು ಆಯೋಗದ ಅವಧಿಯನ್ನು ದಿನಾಂಕ 15/3/2023ರ ತನಕ ವಿಸ್ತರಣೆ ಮಾಡಲಾಗಿದೆ.

7ನೇ ವೇತನ ಆಯೋಗದ ಶಿಫಾರಸು ಜಾರಿಗೊಳಿಸಿದ ಮೇಲೆ ಸರ್ಕಾರಕ್ಕೆ ಆಗುವ ಆರ್ಥಿಕ ಹೊರೆಯ ಕುರಿತು ಕಾಂಗ್ರೆಸ್ ಸರ್ಕಾರಕ್ಕೆ ಆರ್ಥಿಕ ತಜ್ಞರು ಈಗಾಗಲೇ ಎಚ್ಚರಿಕೆಯನ್ನು ನೀಡಿದ್ದಾರೆ. 5 ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಮೂಲ ಹುಡುಕುತ್ತಿರುವ ಸರ್ಕಾರ 7ನೇ ರಾಜ್ಯ ವೇತನ ಆಯೋಗದ ಶಿಫಾರಸು ಜಾರಿಗೊಳಿಸಬೇಕಾದರೆ ಸುಮಾರು 12 ಸಾವಿರ ಕೋಟಿ ರೂ. ಹೊರೆ ಎದುರಿಸಬೇಕು ಎಂದು ಅಂದಾಜಿಸಲಾಗಿದೆ.

ಸರ್ಕಾರಿ ನೌಕರರ ಬೇಡಿಕೆ; ಕರ್ನಾಟಕದ ಸರ್ಕಾರಿ ನೌಕರರು ಸರ್ಕಾರ ನವೆಂಬರ್‌ನಲ್ಲಿಯೇ ಆಯೋಗದ ವರದಿಯನ್ನು ಪಡೆದು ಶಿಫಾರಸು ಜಾರಿಗೊಳಿಸುತ್ತದೆ ಎಂಬ ನಿರೀಕ್ಷೆಯಲ್ಲಿದ್ದರು. ಆದರೆ ಅದು ಸಾಧ್ಯವಾಗಿಲ್ಲ. ಜನವರಿ 6ರಂದು ಮಂಡ್ಯದಲ್ಲಿ ರಾಜ್ಯ ಸರ್ಕಾರಿ ನೌಕರರ ರಾಜ್ಯ ಕಾರ್ಯಕಾರಿ ಸಮಿತಿ ಸಭೆ ನಡೆಯಿತು. ಈ ಸಭೆಯಲ್ಲಿಯೂ 7ನೇ ವೇತನ ಆಯೋಗದ ವರದಿ ಕುರಿತು ಚರ್ಚೆಗಳು ನಡೆದಿವೆ, ಸರ್ವಾನುಮತದಿಂದ ಹಲವು ನಿರ್ಣಯಗಳನ್ನು ಸಭೆ ಅನುಮೋದಿಸಿದೆ.

ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ. ಎಸ್. ಷಡಾಕ್ಷರಿ ಸಭೆಯಲ್ಲಿ ಒಪ್ಪಿಗೆ ಪಡೆಯಲು ಹಲವು ನಿರ್ಣಯಗಳನ್ನು ಮಂಡನೆ ಮಾಡಿದರು.

* 7ನೇ ವೇತನ ಆಯೋಗದಿಂದ ವರದಿ ಪಡೆದು ಪರಿಷ್ಕೃತ ವೇತನ, ಭತ್ಯೆ ಜಾರಿಗೊಳಿಸುವುದು

* ಹಳೆ ಪಿಂಚಣಿ ಯೋಜನೆಯನ್ನು ಪುನಃ ಜಾರಿಗೊಳಿಸುವುದು

* ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ ಅನುಷ್ಠಾನಗೊಳಿಸುವುದು

ಈ ಬೇಡಿಕೆಗಳನ್ನು ಸರ್ಕಾರದ ಗಮನಕ್ಕೆ ತರಲು ಸಂಘಟನೆ ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಚರ್ಚಿಸಿ ನಿರ್ಣಯಗಳಿಗೆ ಅನುಮೋದನೆಗಳನ್ನು ಕೋರಿದರು.

ಸಭೆಯಲ್ಲಿ ಜನವರಿ 20ರೊಳಗೆ ಎಲ್ಲಾ ಜಿಲ್ಲೆ/ ತಾಲೂಕು/ ಯೋಜನಾ ಶಾಖೆಗಳ ಅಧ್ಯಕ್ಷರು ಪದಾಧಿಕಾರಿಗಳು/ ವೃಂದ ಸಂಘಗಳ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ನೌಕರರುಗಳು ಸೇರಿ ಸ್ಥಳೀಯ ಶಾಸಕರು, ವಿಧಾನ ಪರಿಷತ್‌ ಸದಸ್ಯರು ಹಾಗೂ ಸರ್ಕಾರದ ಸಚಿವರುಗಳಿಗೆ ನೌಕರರ ಪ್ರಮುಖ ಬೇಡಿಕೆಗಳನ್ನು ಬಜೆಟ್ ಪೂರ್ವದಲ್ಲಿ ಜಾರಿಗೊಳಿಸಲು ಮನವಿ ಪತ್ರವನ್ನು ಸಲ್ಲಿಸುವುದು.

ರಾಜ್ಯ ಸಂಘದಿಂದ ಮುಖ್ಯಮಂತ್ರಿಗಳು ಹಾಗು ಸರ್ಕಾರವನ್ನು ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸುವುದು. ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸದಿದ್ದರೆ ಜನವರಿ 20ರ ನಂತರ ಸರ್ಕಾರಿ ನೌಕರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸಭೆ ಕರೆದು ಅಲ್ಲಿ ನೌಕರರ ಸಂಘಗಳ ವೃಂದ ಸಂಘಗಳ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ರಾಜ್ಯ ಕಾರ್ಯಕಾರಿ ಸಮಿತಿಯ ಸದಸ್ಯರೊಂದಿಗೆ ಚರ್ಚಿಸಿ ಸಂಘಟನೆಯ ಮುಂದಿನ ಕ್ರಮದ ಬಗ್ಗೆ ನಿರ್ಣಯ ತೆಗೆದುಕೊಳ್ಳುವುದು.

ಸರ್ಕಾರ ವೇತನ ಆಯೋಗದ ಅವಧ ವಿಸ್ತರಣೆ ಮಾಡಿದೆ. ಆದ್ದರಿಂದ 7ನೇ ರಾಜ್ಯ ವೇತನ ಆಯೋಗದ ವರದಿ 2024ರ ಮಾರ್ಚ್‌ನಲ್ಲಿ ಸಲ್ಲಿಕೆಯಾಗಲಿದೆ. ಆದರೆ ರಾಜ್ಯ ಬಜೆಟ್ ಫೆಬ್ರವರಿಯಲ್ಲಿ ಮಂಡನೆಯಾಗಲಿದೆ. ಸರ್ಕಾರ 2024-25ರ ಬಜೆಟ್‌ನಲ್ಲಿ ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ವೇತನ ಆಯೋಗ ವರದಿ ಜಾರಿಗಾಗಿಯೇ ಅನುದಾನ ಮೀಸಲಿಡಲಿದ್ದಾರೆಯೇ? ಎಂದು ಕಾದು ನೋಡಬೇಕಿದೆ.

ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾದಾಗ ರಾಜ್ಯ ಸರ್ಕಾರಿ ನೌಕರರ ಬೇಡಿಕೆಗಳನ್ನು ಪರಿಶೀಲಿಸಲು ದಿನಾಂಕ 9/11/2022ರ ಸರ್ಕಾರಿ ಆದೇಶದಲ್ಲಿ ತ್ರಿ ಸದಸ್ಯರ 7ನೇ ರಾಜ್ಯ ವೇತನ ಆಯೋಗವನ್ನು ರಚಿಸಿ ಆದೇಶಿಸಲಾಗಿತ್ತು.

ರಾಜ್ಯದಲ್ಲಿ ಮೇ ತಿಂಗಳಿನಲ್ಲಿ ವಿಧಾನಸಭೆ ಚುನಾವಣೆ ನಡೆಯಿತು. ಬಳಿಕ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿತು. ಕಾಂಗ್ರೆಸ್ ಸರ್ಕಾರ ಎರಡು ಬಾರಿ ಆಯೋಗದ ಅವಧಿ ವಿಸ್ತರಣೆ ಮಾಡಿದೆ. ಸರ್ಕಾರಿ ನೌಕರರು ಬಜೆಟ್ ಪೂರ್ವಭಾವಿ ಸಭೆಯಲ್ಲಿ ಸರ್ಕಾರದ ಮುಂದೆ ಅಯೋಗದ ವರದಿ ಜಾರಿ ಕುರಿತು ಯಾವ ಬೇಡಿಕೆ ಇಡಲಿದ್ದಾರೆ? ಎಂದು ಕಾದು ನೋಡಬೇಕಿದೆ.

0 Comments: